ಶ್ರೀ ಗಾಯತ್ರೀ ಮಂತ್ರ ಮುದ್ರಾ ಯೋಗ (Yoga Mantra Kannada)
ಚನ್ನಪಟ್ಟಣದ ಸಮೀಪದ, ಶ್ರೀಮದಪ್ರಮೇಯ ದಿವ್ಯಕ್ಷೇತ್ರ, ಮಳೂರಿನಲ್ಲಿ ಮಾ॥ ಚಿಕ್ಕಮ್ಮನವರ ಮದುವೆಗಾಗಿ ಬಂಧು ವರ್ಗವೆಲ್ಲ ಉಪಸ್ಥಿತರಿದ್ದಾಗ ಅನಿರೀಕ್ಷಿತವಾಗಿ ಮಂಗಳ ಕಾರ್ಯ ಸ್ಥಗಿತವಾಯ್ತು. ಮಾ॥ಯವರ ತಮ್ಮನಿಗೂ ಮದುವೆ ಮನೆಯಲ್ಲೇ ಓಡಾಡುತ್ತಿದ್ದ ನನಗೂ ಉಪನಯನವಾದರೂ ಆಗಲಿ ಎಂದು ಕುಟುಂಬದ ಹಿರಿಯರಾದ ಪರಮಪೂಜ್ಯ ಸುಂಕಂದೊರೆಸ್ವಾಮಿ ಅಯ್ಯಂಗಾರರ ನಿರ್ದೇಶನದಂತೆ ಗರ್ಭಾಷ್ಟಮದಲ್ಲಿದ್ದ ನನಗೆ ಅನಿರೀಕ್ಷಿತವಾಗಿ, ‘ಉಪನಯನ’ ಬ್ರಹ್ಮಪದೇಶದ “ಶ್ರೀ ಗಾಯತ್ರಿ ಮಂತ್ರೋಪದೇಶ’ದ ಪವಿತ್ರ ಸಂಸ್ಕಾರವಾಗಿ, ಪುನರ್ಜನ್ಮವೆಂಬಂತೆ “ದ್ವಿಜತ್ವ” ಹಾಗೂ “ವಿಷೇಶ, ಪ್ರಜ್ಞಾವಾನ್”, “ವಿಪ್ರ” ಆಗಲು ಭಗವದ್ಧಯದಿಂದ ಜ್ಞಾನದ ಬಾಗಿಲು ತೆರೆದ ಪರಮಪೂಜ್ಯ ಉದೇ।।ಪ್ರ ದಿ।।ಸುಂಕಂ ದೊರೆಸ್ವಾಮಿ ಅಯ್ಯಂಗಾರರ ಪಾದಾರವಿಂದಗಳಲ್ಲಿ ಈ ಕಿರು ಪುಷ್ಪಶ್ರದ್ಧಾಭಕ್ತಿಗಳಿಂದ ಅರ್ಪಿತ.
ಪಿತೃವಿಯೋಗದಿಂದ ಅನಾಥರಾಗಿದ್ದ ನನಗೆ ಹಾಗೂ ನನ್ನ ಮಾತೃಶ್ರೀಗೆ ಆಶ್ರಯ ನೀಡಿದ ಪರಮಪೂಜ್ಯ ಮಾ॥ ಚೊಕ್ಕಮ್ಮನವರ ಚರಣಾರವಿಂದಗಳಿಗೆ ನಮನ ಎಲ್ಲ ಕಷ್ಟಕಾರ್ಪಣ್ಯಗಳಿಂದ ಸಾಕಿದ ಮಾತೃಶ್ರೀ ಮಹಾಲಕ್ಷ್ಮಮ್ಮ, ಕಂಡರಿಯದ ವಿದ್ವಾಂಸ ಪೂಜ್ಯ ಪಿತೃಶ್ರೀ ಆಸೂರಿಕೃಷ್ಣಸ್ವಾಮಿ ಅಯ್ಯಂಗಾರರ ಚರಣಾರವಿಂದಗಳಲ್ಲಿ ನಮನ. ನನ್ನೆಲ್ಲ ಸುಖ ದುಃಖಗಳಲ್ಲಿ ಭಾಗಿಯಾಗಿ, ಮೂರು ಸಂತಾನ ರತ್ನಗಳನ್ನು ನೀಡಿ ಕಣ್ಮರೆಯಾದ ಜೀವಸಖಿ ಸೌ॥ ವಿಜಯಲಕ್ಷ್ಮಿಯ ಸವಿನೆನಪಿಗೆ.